ಫಾರ್ಮಿಸಿಡೀ
ಇರುವೆಗಳ ಕುಟುಂಬ ಹೈಮೆನಾಪ್ಪರ ಗಣಕ್ಕೆ ಸೇರಿದೆ. ಇರುವೆಗಳಲ್ಲಿ ಹಲವಾರು ಬಗೆಗಳಿವೆಯಾದರೂ ಎಲ್ಲಕ್ಕೂ ಅನ್ವಯವಾಗುವ ಕೆಲವು ಮೂಖ್ಯ ಲಕ್ಷಣಗಳು ಇಂತಿವೆ: ಹೊಟ್ಟೆಯ ಮೊದಲನೆಯ ಖಂಡ (ಅಥವಾ ಮೊದಲೆರಡು ಖಂಡಗಳು) ಹಿಂಭಾಗದೆಡೆಗೆ ಉಬ್ಬಿಕೊಂಡಿದ್ದು ಮಿಕ್ಕೆಲ್ಲ ಖಂಡಗಳಿಂದ ಬೇರ್ಪಟ್ಟಂತಿರುತ್ತದೆ; ಕುಡಿಮೀಸೆಯ ತುದಿ ದಪ್ಪವಾಗಿದೆ; ರೆಕ್ಕೆಗಳು (ಇದ್ದರೆ) ಪೊರೆಯಂತಿವೆ; ದಿಂಡುಗಳು ಕಡಿಮೆ; ತಲೆ, ಎದೆ, ಹೊಟ್ಟೆ ಪರಸ್ಪರ ಪ್ರತ್ಯೇಕವಾಗಿವೆ; ಸೊಂಟ ಅಥವಾ ತೊಟ್ಟಿನ ಮೇಲೆ ಒಂದೊ ಎರಡೊ ಗಂತಿಗಳಿವೆ.

	ಕೀಟಗಳ ಪೈಕಿ ಇರುವೆಗಳೇ ಮನುಷ್ಯನಿಗೆ ಅತ್ಯಂತ ಪರಿಚಿತ ಜೀವಿಗಳೆಂದರೆ ತಪ್ಪಿಲ್ಲ; ಅಲ್ಲದೆ ಇವು ಕೀಟವರ್ಗದ ಉಳಿದೆಲ್ಲ ಸದಸ್ಯಗಳಿಗಿಂತ ಬಹಳ ಮುಂದುವರಿದಂಥವು. ಸಂಖ್ಯೆಗಳಲ್ಲೂ ಇವು ಉಳಿದವನ್ನು ಮೀರಿಸಿವೆ.

	ಇರುವೆಗಳು ಸಾಮಾಜಿಕ ಕೀಟಗಳು; ನಿವಹಗಳನ್ನು (ಕಾಲಸಿ) ರಚಿಸಿಕೊಂಡು ಜೀವಿಸುತ್ತವೆ. ಇವುಗಳ ಸಮಾಜವ್ಯವಸ್ಥೆ ವಿಶಿಷ್ಟ ಬಗೆಯದು; ಒಂದೊಂದು ಸಮಾಜದಲ್ಲೂ (ನಿವಹ) ರಾಣಿ, ಗಂಡು ಇರುವೆಗಳು ಹಾಗು ಕೆಲಸಗಾರ ಇರುವೆಗಳು ಎಂಬ ಮೂರು ಬಗೆಗಳುಂಟು. ಇಡೀ ಸಮಾಜಕ್ಕೆ ಸಾಮಾನ್ಯವಾಗಿ ಒಂದೇ ಒಂದು ರಾಣಿ, ಗಂಡು ಹಾಗೂ ಕೆಲಸಗಾರಗಳಿಗಿಂತ ಗಾತ್ರದಲ್ಲಿ ಇದು ದೊಡ್ಡದು. ಇದಕ್ಕೆ ರೆಕ್ಕೆಗಳು ಇರುವುವಾದರೂ ಸಂಭೋಗದ ತರುವಾಯ ಅವು ಬಿದ್ದು ಹೋಗುವುವು. ನಿವಹವನ್ನು ಆರಂಭಿಸುವುದು ಮತ್ತು ಮೊಟ್ಟೆಗಳನ್ನು ಇಡುವುದು ರಾಣಿಯ ಕೆಲಸ. ಗಂಡುಗಳಿಗೆ ಸಹ ರೆಕ್ಕೆಗಳುಂಟು. ಇವುಗಳ ಆಯಸ್ಸು ಹೃಸ್ವಾವಧಿಯದು ಸಂಭೋಗದ ಅನಂತರ ಸತ್ತೇ ಹೋಗುವುವು. ಕೆಲಸಗಾರ ಇರುವೆಗಳಿಗೆ ರೆಕ್ಕೆ ಇಲ್ಲ. ಇವು ಬಂಜೆ ಕೂಡ. ಇವು ಹೆಸರಿಗೆ ತಕ್ಕಂತೆ ಗೂಡಿನ ಕೆಲಸ ಕಾರ್ಯಗಳಲ್ಲಿ ಸದಾ ನಿರತವಾಗಿರುವುವು.

	ಇರುವೆ ಗೂಡುಗಳಲ್ಲಿ ಹಲವಾರು ಬಗೆ. ಒಂದು ಗೂಡಿನಲ್ಲಿ ಕೇವಲ ಕೆಲವೇ ಇರುವೆಗಳಿರಬಹುದು. ಇಲ್ಲವೆ ಸಹಸ್ರಾರು ಇರುವೆಗಳಿರಬಹುದು. ಗೂಡುಗಳನ್ನು ಹಲವಾರು ತೆರನ ನೆಲೆಗಳಲ್ಲಿ ರಚಿಸುವುದಿದೆಯಾದರೂ (ಉದಾಹರಣೆಗೆ ಸಸ್ಯಕಾಂಡ, ಕಾಯಿ, ವಿಶೇಷ ಸಸ್ಯಗಂಥಿ(ಗಾಲ್), ಮರಮುಟ್ಟುಗಳು) ವಿಶೇಷವಾಗಿ ಗೂಡುಗಳಿರುವುದು ನೆಲದಲ್ಲಿ. ಗೂಡುಗಳು ಸರಳವಾಗಿರಬಹುದು ಇಲ್ಲವೆ ದೊಡ್ಡವಾಗಿದ್ದು ಅನೇಕ ಸುರಂಗ, ಅಟ್ಟಣೆಗಳನ್ನು ಒಳಗೊಂಡಿರಬಹುದು. ಕೆಲವು ಬಗೆಯ ಇರುವೆಗಳ ಗೂಡುಗಳಂತೂ ನೆಲದಲ್ಲಿ ಹಲವಾರು ಮೀಟರುಗಳಷ್ಟು ಆಳಕ್ಕೆ ಹೋಗಿರುವುದುಂಟು. ಇಂಥ ಗೂಡುಗಳಲ್ಲಿ ಹಲವಾರು ತೆರೆನ ಕೋಣೆಗಳಿದ್ದು ಇವುಗಳ ಪೈಕಿ ಕೆಲವು ಮೊಟ್ಟೆಗಳ ಸಂಗ್ರಹಾಗಾರಗಳೂ ನೆಲದಲ್ಲಿ ಹಲವಾರು ತೆರೆನ ಕೋಣೆಗಳಿದ್ದು ಇವುಗಳ ಪೈಕಿ ಕೆಲವು ಮೊಟ್ಟೆಗಳ ಸಂಗ್ರಹಾಗಾರಗಳೂ ಇನ್ನು ಕೆಲವು ಉಗ್ರಾಣಗಳೂ ಆಗಿ ಬಳಕೆಯಾಗುತ್ತವೆ.

	ಕೆಲವು ನಿರ್ದಿಷ್ಟ ಶ್ರಾಯಗಳಲ್ಲಿ ಗಂಡು ಹಾಗೂ ರಾಣಿ ಇರುವೆಗಳು ಉತ್ಪತ್ತಿಯಾಗಿ ಸಂಭೋಗಹಾರಾಟದಲ್ಲಿ ತೊಡಗುವುವು. ಪರಸ್ಪರ ಕೂಡಿದ ಸ್ವಲ್ಪ ಸಮಯದಲ್ಲೇ ಗಂಡುಗಳು ಸತ್ತುಹೋಗುವುವು. ರಾಣಿ ಇರುವೆ ಹೊಸ ಸಮಾಜದ (ನಿವಹದ) ರಚನೆಯನ್ನು ಆರಂಭಿಸುತ್ತದೆ. ಕೆಲವೊಮ್ಮೆ ತನ್ನ ಹಳೆಯ ಗೂಡಿಗೋ ಇಲ್ಲವೆ ಬೇರೆ ಇರುವೆಗಳ ಗೂಡುಗೊ ನುಗ್ಗಿ ಹೊಸ ವಸಾಹತನ್ನು ನಿರ್ಮಿಸುವುದೋ ಉಂಟು. ಇದಕ್ಕೆ ಮುನ್ನ ತನ್ನ ರೆಕ್ಕೆಗಳನ್ನು ಕಳಚಿಹಾಕಿ ಯುಕ್ತ ನೆಲೆಯನ್ನು ಆಯ್ದು, ಅದರಲ್ಲಿ ಚಿಕ್ಕ ಗುಂಡಿಯನ್ನು ತೋಡಿ, ಮೊಟ್ಟೆಗಳನ್ನು ಇಡಲು ಆರಂಭಿಸುತ್ತದೆ. ಮೊದಲು ಮರಿಗಳ ಪೋಷಣೆಯನ್ನೂ ಇದು ನಿರ್ವಹಿಸುತ್ತದೆ. ಆದರೆ ಒಮ್ಮೆ ಕೆಲಸಗಾರ ಇರುವೆಗಳು ಹುಟ್ಟಿದ ತರುವಾಯ, ಗೂಡಿನ ಮುಂದಿನ ಉಸ್ತುವಾರಿ-ಗೂಡಿನಲ್ಲಿ ಹೆಚ್ಚಿನ ಕೋಣೆಗಳ ನಿರ್ಮಾಣ, ದುರಸ್ತು, ಆಹಾರಸಂಗ್ರಹಣೆ, ಮರಿಗಳ ಪೋಷಣೆ ಇತ್ಯಾದಿ ಕೆಲಸಗಾರರದ್ದೇ, ರಾಣಿಯದೇನಿದ್ದರೂ ಮೊಟ್ಟೆಗಳನ್ನಿಡುವ ಕಾರ್ಯಮಾತ್ರ. ರಾಣಿ ಇರುವೆ ಹಲವಾರು ವರ್ಷಕಾಲ ಬದುಕಿರುತ್ತದೆ. 

	ಇರುವೆಗಳ ಆಹಾರ ನೂರೆಂಟು ತೆರೆನಾದ್ದು; ಕೆಲವು ಮಾಂಸಹಾರಿಗಳು. ಮತ್ತೆ ಕಲವು ಸಸ್ಯಾಹಾರಿಗಳು, ದುಂಬಿ, ಜೇನು ಅಥವಾ ಪ್ರಾಣಿ ಇಲ್ಲವೆ ಸಸ್ಯಗಳಿಂದ ಹೊರಬರುವ ಅಂಟು, ಜಿಡ್ಡು, ಮುಂತಾದ ರಸಗಳನ್ನು ತಿಂದು ಜೀವಿಸುವುವು ಕೆಲವಾದರೆ ಬೇರೆ ಇರುವೆಗಳ ಸ್ರಾವವನ್ನು ತಿನ್ನುವಂಥವು ಮತ್ತೆ ಕೆಲವು. ಹಲವು ಬಗೆಗಳಲ್ಲಿ ಆಹಾರವಿನಿಮಯವೂ ಉಂಟು.

	ಆಹಾರಕ್ಕಾಗಿ ಎಂಥ ಸ್ಥಳವನ್ನಾದರೂ ಹೊಕ್ಕು ಹುಡುಕಿ ಸಂಗ್ರಹಿಸುವ ಸಾಮಥ್ರ್ಯ ಇರುವೆಗಳಿಗೆ ಇದೆ. ಈ ದೃಷ್ಟಿಯಿಂದ ಇರುವೆಗಳು ಹಲವಾರು ತರದಲ್ಲಿ ಪಿಡುಗುಗಳೆನಿಸಿವೆ.

	ಇರುವೆಗಳಿಗೆ ಶತ್ರುಗಳನ್ನೂ ಮಿತ್ರರನ್ನೂ ಪತ್ತೆಹಚ್ಚುವ ಸೂಕ್ಷ್ಮತರದ ಒಂದು ಸ್ರಾವವಿದೆ. ಪ್ರತಿ ಜಾತಿಯ ಇರುವೆ ತನ್ನದೇ ಆದ ಒಂದು ಸ್ರಾವವನ್ನು ತನ್ನ ಮೈಯಿಂದ ಚಿಮ್ಮುತ್ತ ಹೋದಲ್ಲೆಲ್ಲ ವಿಶಿಷ್ಟ ವಾಸನೆಯನ್ನು ಬೀರುತ್ತದೆ. ಇಂಥ ಸಾಮಥ್ರ್ಯದಿಂದಾಗಿ ಎಲ್ಲಿಗೆ ಹೋದರೂ ಪುನಃ ತಮ್ಮ ವಾಸಸ್ಥಳಕ್ಕೆ ಬರುವುದೂ ತಮ್ಮ ಸಹೋದ್ಯೋಗಿಗಳನ್ನು ಪತ್ತೆ ಹಚ್ಚುವುದೂ ಇರುವೆಗಳಿಗೆ ಸಾಧ್ಯವಾಗಿದೆ. ಕೆಲವು ಬಾರಿ ಶತ್ರುಗಳನ್ನು ಹೆದರಿಸಲೂ ಇದನ್ನು ಉಪಯೋಗಿಸಿಕೊಳ್ಳುವುದಿದೆ. ಇರುವೆಗಳ ದಾಯಾದಿ ಜೇನಿಗಿರುವ ಚುಚ್ಚುಮುಳ್ಳು ಇರುವೆಗಳಿಗೆ ಇಲ್ಲದಿದ್ದರೂ ನೋವನುಂಟು ಮಾಡುವಷ್ಟು ಚುಚ್ಚುಬಲ್ಲವು ಅಥವಾ ಬಾಯಿಂದ ಕಚ್ಚಬಲ್ಲವು.

	ಫಾರ್ಮಿಸಿಡೀ ಕುಟುಂಬದಲ್ಲಿ ಏಳು ಉಪಕುಟುಂಬಗಳಿವೆ: ಕೆಂಜಗ (ಈಕೊಫಿಲ್ಲಸ್ಮರಾಗಡೈನ); ಗೊದ್ದ (ಕ್ಯಾಂಪೊನೋಟಸ್ ಕಂಪ್ರೆಸಸ್); ಕೆಂಪಿರುವೆ (ಸೊಲಿನಾ ಪ್ಲಿಸ್ ಜೆಮಿನೇಟ); ದೊಡ್ಡರೆಕ್ಕೆ ಇರುವೆ (ಡೊರೈಲಸ್ ಓರಿಯಂಟ್ಯಾಲಿಸ್) ಮುಂತಾದವು ಕೆಲವು ಮುಖ್ಯ ಜಾತಿಗಳು.
(ಜಿ.ಕೆ.ವಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ